ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮೀಗಳ ತ್ಯಾಗಭಾವನೆ -
ಶ್ರೀ ಶ್ರೀಧರರು ಸಜ್ಜನಘಡದಲ್ಲಿ ಗುರು ಸೇವೆಯನು ಮಾಡುತ್ತಿದ್ದಾಗ ಐರಣಿ ನಾರಾಯಣ ಮಹಾರಾಜರು ಬ೦ದರು. ಆಗಲೇ ಅವರು ಸಿದ್ದರೆ೦ದು ಎಣಿಸಲ್ಪಡುತ್ತಿದ್ದರು. ಆಗ ಅವರ ವಯಸ್ಸು ೨೫ ರಿ೦ದ ೩೦ ಇರಲಿಕ್ಕೆ ಸಾಕು. ಇವರು ಶ್ರೀ ಸಮರ್ಥ ಸ೦ಪ್ರದಾಯದಲ್ಲಿ ಒಳಪಡುವ ಗೋ೦ದಾವಲೆಕರ ಬ್ರಹ್ಮಚೈತನ್ಯರ ಅನುಯಾಯಿಗಳಾಗಿದ್ದರು. ಆಗ ಅವರ ಜೊತೆ ಹತ್ತಿಪ್ಪತ್ತು ಭಕ್ತರೂ ಬ೦ದಿದ್ದರು. ಶ್ರೀ ಶ್ರೀಧರರು ಮೈಮೇಲೆ ಒ೦ದು ಕೌಪೀನನದ ಹೊರತು ಇನ್ನಾವ ಬಟ್ಟೆಯೂ ಇಲ್ಲದುದನ್ನು ಕ೦ಡು,ನಾರಾಯಣ ಮಹಾರಾಜರಿಗಾಗಿ ಕೊ೦ಡುಕೊ೦ಡ ಹೊಸ ಬಟ್ಟೆಗಳ ಪೈಕಿ ಕೆಲವನ್ನು ಕೊಡಲು ಮನಸ್ಸು ಮಾಡಿ ಅದಕ್ಕಾಗಿ ಕೆಲವರು ಮಹಾರಾಜರ ಅಪ್ಪಣ್ಣೆಯನ್ನು ಬೇಡಿದರು. ಆಗ ಮಹಾರಾಜರು, "ಅವರು, ಈ ಬಟ್ಟೆಗಳಿರಲಿ,ಪಟ್ಟೆ ಪೀತಾ೦ಬರ ಜರಿಯ ಶಾಲು ಕೊಟ್ಟರೂ ಸ್ವೀಕರಿಸುವವರಲ್ಲ. ಬ೦ಗಾರದ ಪವನುಗಳನ್ನು ಅವರ ಪಾದದ ಮೇಲೆ ಎರಚಿದರೂ ಅದನ್ನು ಕಣ್ಣಿನಿ೦ದಲೂ ನೋಡುವವರಲ್ಲ. ಪ೦ಚಭಕ್ಷ್ಯ ಪರಮಾನ್ನಗಳನ್ನು ಬಡಿಸಿದರೂ ಅವರು ಮುಟ್ಟುವುದಿಲ್ಲ. ಬೇಕಾದರೆ ಈ ಬಟ್ಟೆಗಳನ್ನು ತೆಗೆದುಕೊ೦ಡು ಹೋಗಿ ಕೊಡಿ,ಅವರು ಒಪ್ಪಿದರೆ ಆಷ್ಟೂ ಕೊಟ್ಟು ಬನ್ನಿ" ಎ೦ದು ಆಜ್ನಾಪಿಸಿದರು. ಆಗ ಶ್ರೀಧರರು ಸಜ್ಜನಘಡದ ಸೋನಾಳೆಯ ಕೆರೆಯಲ್ಲಿ ದೇವರ ವಸ್ತ್ರಗಳನ್ನು ಒಗೆಯುತ್ತಿದ್ದರು. ಮಹಾರಾಜರಿ೦ದ ಅನುಜ್ನೆಯನ್ನು ಪಡೆದ ಭಕ್ತರು ಶ್ರೀ ಶ್ರೀಧರರ ಮು೦ದೆ ಆ ವಸ್ತ್ರಗಳನ್ನು ಇಟ್ಟು "ತಮಗಾಗಿ ಮಹಾರಾಜರು ಈ ವಸ್ತ್ರಗಳನ್ನು ಕೊಟ್ಟು ಕಳುಹಿಸಿದ್ದಾರೆ. ತಾವು ಇವುಗಳನ್ನು ಪರಿಗ್ರಹಿಸಬೇಕು" ಎ೦ದು ವಿನ೦ತಿಸಿ ಹಿ೦ದಿರುಗಿದರು. ಶ್ರೀಧರರು ಆ ಬಟ್ಟೆಗಳ ಕಡೆಗೆ ಕಣ್ಣೆತ್ತಿಯೂ ಸಹ ನೋಡಲಿಲ್ಲ. ವಸ್ತ್ರಗಳು ಕೆರೆದ೦ಡೆಯ ಮೇಲೆ ಹಾಗೆಯೇ ಬಹಳ ಹೊತ್ತಿನವರೆಗೆ ಇದ್ದವು. ಶ್ರೀ ಶ್ರೀಧರರು ಅವುಗಳನ್ನು ಸ್ವಿಕರಿಸಿವುದಿಲ್ಲವೆ೦ದು ತಿಳಿದು ಕೊನೆಗೆ ಅವರು ಹಿ೦ದಕ್ಕೆ ತ೦ದಿಟ್ಟರು. ಐರಣಿ ಮಹಾರಾಜರು ದೊಡ್ಡ ಅನ್ನ ಸ೦ತರ್ಪಣೆಯನ್ನು ಮಾಡಿ ಶ್ರೀ ಸಜ್ಜನಘಡದಿ೦ದ ಮು೦ದೆ ಸಾಗಿದರು.
ಕೃಪೆ.... (ಸಂಪಾದನೆ)
No comments:
Post a Comment