ರವಿಕಿರಣ ಮಂಕಾದಾಗ ಹಕ್ಕಿಗಳ ಕಲವರ ಶೋಕಗೀತೆಯಾದಾಗ, ಧರಿತ್ರಿಯು ಮೌನವನು
ತಾಳಿದಾಗ, ಈ ಲೋಕವೆಲ್ಲಾ ಸ್ತಬ್ಧವಾದಾಗ
ಬಂತೊಂದು ವಾರ್ತೆ ಆನಂದವನದ ಪೂಜ್ಯರು ಚಿದಂಬರನಲ್ಲಿ ಲೀನವಾದರು ಎಂದು. ಪೂಜ್ಯರು ಇಚ್ಛಾಮರಣಿಗಳು ಜ್ಯೇಷ್ಠಶುದ್ಧ
ದ್ವಿತೀಯಾ ದಿನದಂದು ಭಕ್ತಸಮೂಹದ ಮುಂದೆಯೇ ಹೇಳಿದರಂತೆ ಸತ್ತರ್‌ಬಾಹತ್ತರ್ ಏನಿದರ ಅಂತರಾರ್ಥ ? ತಿಳಿಯಬೇಕಲ್ಲವೇ ?
ಒಬ್ಬ ನಿರಾಡಂಬರ ವ್ಯಕ್ತಿಯೆಂದು ಸೂಚಿಸಲೇ
? ಜ್ಞಾನಿ ಈತ, ಕರ್ಮಠನೀತ, ಎಂದು ತಿಳಿಸಲೇ ? ಸದ್ಭ್ರಾಹ್ಮಣನೆಂದು
ಪರಿಚಯಿಸಲೇ ? ಗುರುಎಂದು ಜ್ಞಾಪಿಸಲೇ
? ಇವುಗಳನ್ನೆಲ್ಲವನ್ನೂ
ಮೀರಿದವರೇ ಸದ್ಗುರುಗಳು ಪರಮಪೂಜ್ಯ ಚಿದಂಬರಮೂರ್ತಿ ಚಕ್ರವರ್ತಿಗಳು.
ಜಾತಸ್ಯ ಹಿ ಮರಣಂ ಧ್ರುವಂ, ಧ್ರುವಂ ಜನ್ಮ ಮೃತಸ್ಯ ಚ | " ಎಂದಿಗಾದರೊಂದು ದಿನ ಸಾವು ತಪ್ಪದೋ " ಎಂಬ
ಉಕ್ತಿಯನ್ನು ದಾಸರ ಪದವನ್ನು ಆಲಿಸಿದ್ದೇವೆ. ಹುಟ್ಟಿದವ ಸಾಯಲೇ ಬೇಕು ಎಂಬ ಸತ್ಯಸಂಗತಿಯನ್ನು ಅರಿತಿದ್ದೇವೆ.
ಆದರೆ ಹುಟ್ಟು ಯಾತಕೆ ಎಂಬ ಚಿಕ್ಕದಾದ ಗೂಢಪ್ರಶ್ನೆಗೆ ನಮ್ಮಲ್ಲಿ ಉತ್ತರವುಂಟೆ ? ಆ ಉತ್ತರಕ್ಕಾಗಿಯೇ ಈ
ಜೀವನ. ವಸ್ತ್ರವನ್ನು ಬಾರಿ ಬಾರಿ ಧರಿಸಿ ವಸ್ತ್ರದ ಸ್ಥಿತಿ ಹೇಗೆ ಜೀರ್ಣವಾಗಿ ನಾಶಹೊಂದುವುದೋ ಹಾಗೆ
ನಮ್ಮ ಜೀವನದಲ್ಲಿಯೂ ಕೂಡ ಬರುವ ಎಲ್ಲ ತರಹದ ಅನುಭವಗಳನ್ನು ಧರಿಸಿ ಶರೀರವೆಂಬ ಜೀರ್ಣವಸ್ತ್ರವನ್ನು
ತ್ಯಜಿಸಬೇಕಾಗುತ್ತದೆ. ಚತುರ್ವಿಧಪುರುಷಾರ್ಥಗಳಲ್ಲಿ ಶ್ರೇಷ್ಠವಾದದ್ದು ಮೋಕ್ಷ. ಈ ಮೋಕ್ಷವನ್ನು ಪಡೆಯುವುದೇ
ಒಂದು ಮಾನವನ ಪ್ರಯತ್ನ. ಇದಕ್ಕಾಗಿಯೇ ಈ ಹುಟ್ಟು. ಆತ್ಯಂತಿಕ ದುಃಖ ನಿವೃತ್ತಿಯೇ ಮೋಕ್ಷ ಎಂಬುದಾಗಿ
ದಾರ್ಶನಿಕರು. " ಆನಂದ ಪ್ರಾಪ್ತಿಯೇ ಮೋಕ್ಷ " ಎಂಬುದಾಗಿ ವೇದಾಂತಿಗಳು ಸ್ವ ಸ್ವ ಸಿದ್ಧಾಂತಗಳನ್ನು
ಸ್ಪಷ್ಟಪಡಿಸಿದ್ದಾರೆ. ಈ ತರಹದ ದೃಷಿಕೋನವನ್ನು ಇಟ್ಟುಕೊಂಡು ಮಾನವರು ಜೀವಿಸಬೇಕಾಗಿದೆ ಎಂಬುದು ಸತ್ಯಸಂಗತಿ.
ನಮ್ಮ ಮತ್ತು ಪೂಜ್ಯರ ನಡುವೆ ಏನು ಅಂತರ ? ನಿರೂಪಿಸಲಾಗದಂತರ. ನಾನು
ಆದಿಯಲ್ಲಿ ಇಚ್ಛಾಮರಣಿಗಳು ಪೂಜ್ಯರು ಎಂದು ತಿಳಿಸಿದ್ದೇನೆ. ಅದು ಅತಿಶಯೋಕ್ತಿಯಲ್ಲ. ಭೀಷ್ಮಾಚಾರ್ಯರು
ಹೇಗೆ ಶರಶಯ್ಯೆಯಲ್ಲಿ ಮಲಗಿದಾಗ ಉತ್ತರಾಯಣ ಪುಣ್ಯಕಾಲವನ್ನು ನಿರೀಕ್ಷಿಸಿ ತಮ್ಮ ದೇಹತ್ಯಾಗವನ್ನು ಮಾಡಿದ
ಮಹಾತ್ಮರೋ ಹಾಗೆ ಅನಾರೋಗ್ಯ ಎಂಬ ಶಯ್ಯೆಯಲ್ಲಿ ಮಲಗಿದ ಪೂಜ್ಯರು ಉತ್ತರಾಯಣದಲ್ಲಿಯೇ ದೇಹತ್ಯಾಗವನ್ನು
ಮಾಡಿ ತಮ್ಮ ಅಭೂತಪೂರ್ವವಾದ ಜೀವನದ ಉದ್ದೇಶವನ್ನು ತಿಳಿಸಿಕೊಟ್ಟಿದ್ದಾರೆ.
ಸತ್ತರ್‌ಬಾಹತ್ತರ್ ಏನಿದರ ಗೂಢಾರ್ಥ ? ನಿಮಗೆ ತಿಳಿಯಿತೇ ? ತಿಳಿಯುವುದೇ ನನ್ನಂತಹ
ಅಜ್ಞರಿಗೆ ? ಇದರ ಅಂತರಾರ್ಥವನ್ನು
ಸ್ವಾಮಿಗಳೇ ಸ್ವತಃ ಹೀಗೆ ಹೇಳಿದರಂತೆ. ಸತ್ತರ್ ಹಿಂದಿಭಾಷೆಯಲ್ಲಿ ೭೦ಎಂಬ ಸಂಖ್ಯೆಯನ್ನು ಸೂಚಿಸುತ್ತದೆ.
ಬಾ ಹತ್ತರ್ ಅಂದರೆ ಹತ್ತಿರ ಬಾ ಎಂದರ್ಥ. ಸ್ವಾಮಿಯು ನನ್ನನ್ನು ಹತ್ತಿರು ಕರೆಯುತಿಹನು ನೋಡಲ್ಲಿ ಎಂದು
ದೇವಸ್ಥಾನದ ಕಡೆ ಕೈಮಾಡಿ ತೋರಿಸಿದರಂತೆ. ಪೂಜ್ಯರು ತಮ್ಮ ಜನ್ಮದಿಂದ ಮರಣದವರೆಗೆ ಅವರ ಜೀವನದಲ್ಲಿ
ಎಂಥವರೂ ಆಚರಿಸಲಾಗದ ಅನುಷ್ಠಾನಗಳನ್ನು ಮಾಡಿದ್ದಾರೆ. ಹತ್ತಿರದಿಂದ ನೋಡಿದ್ದೇನೆ ಎಂಬ ಉತ್ಸಾಹದಿಂದ
ಬರೆಯುತ್ತಿರುವ ಮಾತುಗಳು ಎಂದು ಆಲೋಚಿಸದಿರಿ. ಆಬಾಲವೃದ್ಧರಿಗೂ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ
ಸ್ವಾಮಿಗಳ ವ್ಯಕ್ತಿತ್ವದ ಶಬ್ದತರಂಗಳು ತಲುಪಿದ್ದನ್ನು ಆಲಿಸಿದ್ದೇವೆ. ಪ್ರತ್ಯಕ್ಷವಾಗಿಯೂ ನೋಡಿದ್ದೇವೆ.
ನೋಡಿ ಸ್ವತಃ ಬೆರಗಾಗಿದ್ದ ಒಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಂದು ಬಾರಿ ಸ್ನೇಹಿತರೊಂದಿಗೆ
ದಕ್ಷಿಣಭಾರತದ ಯಾತ್ರೆಗೆ ಹೋಗಿದ್ದೆ. ಪೂರ್ವಜನ್ಮದ ಸುಕೃತದಿಂದ ಕಂಚಿಯ ಶ್ರೀಗಳನ್ನು ದರ್ಶಿಸುವ ಭಾಗ್ಯ
ನನ್ನದಾಗಿತ್ತು. ಸಮಂತ್ರಪೂರ್ವಕವಾಗಿ ಪೂರ್ಣಫಲಗಳನ್ನು ಶ್ರೀಗಳಿಗೆ ಅರ್ಪಿಸಿ ನಮಸ್ಕರಿಸಿದಾಗ ಎಲ್ಲಿಂದ
ಬಂದಿದ್ದೀರಿ ಎಂಬುದಾಗಿ ಶ್ರೀಗಳು ಪ್ರಶ್ನಿಸಿದರು. ನಾವು ಕರ್ನಾಟಕರಾಜ್ಯದ ಹಾವೇರಿಯ ಹತ್ತಿರುವಿರುವ
ಅಗಡಿಯೆಂಬ ಕ್ಷೇತ್ರವಿದೆ. ಅಲ್ಲಿಯ ಪಾಠಶಾಲೆಯ ವಿದ್ಯಾರ್ಥಿಗಳು ನಾವು ಎಂದು ಹೇಳಿದಾಗ ಮರುಕ್ಷಣವೇ
ಚಿದಂಬರ ಮೂರ್ತಿಗಳು ಸೌಖ್ಯವಾಗಿದ್ದಾರಾ ಎಂದು ಪ್ರಶ್ನಿಸಿದರು. ಅಗಡಿ ಎಲ್ಲಿ ? ಕಂಚಿ ಎಲ್ಲಿ ? ಆಗ ನಮ್ಮ ಆಶ್ಚರ್ಯಕ್ಕೆ
ಪಾರವೇ ಇರಲಿಲ್ಲ ಯಾಕೆಂದರೆ ನಿತ್ಯ ಮಠದಲ್ಲಿ ಪೂಜ್ಯರಲ್ಲಿರುವ ಸರಳತೆಯನ್ನು ಮತ್ತು ಅವರ ನಿತ್ಯ ಕೈಂಕರ್ಯಗಳನ್ನು
ಗಮನಿಸಿ ಕುಸುಮದಲ್ಲಿರುವ ಗಂಧವನ್ನು ಘ್ರಾಣಿಸದೇ ಮೋಸಹೋದೆವಲ್ಲ ಎಂದು ಪಶ್ಚಾತ್ತಾಪಪಟ್ಟೆವು.
ಯಾರೂ ಮಾಡಲಾಗದ ಅನುಷ್ಠಾನಗಳನ್ನು ಪೂಜ್ಯರು
ಮಾಡುತ್ತಿದ್ದರು ಎಂಬುದಾಗಿ ಹೇಳಿದೆನಲ್ಲ. ಯಾವ ತರಹದ ಅನುಷ್ಠಾನಗಳವು ಯಜ್ಞಯಾಗಾದಿಗಳೇ ? ಪೂಜಾದಿಗಳೇ ? ನಿತ್ಯಕರ್ಮಗಳೇ ? ಇವುಗಳೆಲ್ಲವನ್ನೂ ಬ್ರಾಹ್ಮಣರು
ಮಾಡಲೇ ಬೇಕು. ಇದರಲ್ಲೇನಿದೆ ವೈಶಿಷ್ಟ್ಯ? ಪೂಜ್ಯರ ಅನುಷ್ಠಾನದಲ್ಲಿದೆ ಅಗಾಧ ವೈಶಿಷ್ಟ್ಯ.
ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಜ್ಞಾನಿಗಳಿಂದ ಹಿಡಿದು ಅಜ್ಞಾನಿಗಳವರೆಗೂ ಯಾರನ್ನೂ ಕೂಡ ಒಂದು
ಸಾರಿಯಾದರೂ ನಿಂದೆ ಮಾಡಿದ ಉದಾಹರಣೆಗಳುಂಟೆ. ಒಂದು ಉದಾಹರಣೆಯೂ ದೊರಕದು ಪೂಜ್ಯರ ಆ ಜೀವನದಲ್ಲಿ.
" ಪರನಿಂದಾಂ ವಿಹಾಯ " ಎಂಬ ಉಕ್ತಿಯನ್ನು
ತಮ್ಮ ಜೀವನದಲ್ಲಿ ಅಳವಡಿಸಿಕೊಂಡುಬಂದವರು ಇವರು. ನನ್ನೊಂದಿಗೆ ನಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು
ಇಚ್ಛಿಸುತ್ತೇನೆ. ನಾನು ಪೂಜ್ಯರೊಟ್ಟಿಗೆ ಸಾಗರ ಪ್ರಾಂತದ ಸೇವೆಗಾಗಿ ಹೋಗಿದ್ದೆ. ಅಂದು ತುಮರಿಸೀಮೆಯಲ್ಲಿ
ಒಬ್ಬ ಭಕ್ತರ ಮನೆಯಲ್ಲಿ ಸ್ವಾಮಿಗಳು ವಾಸ್ತವ್ಯವನ್ನು ಮಾಡಿದ್ದರು. ಅವರ ಮನೆಯಿಂದಿ ಬೇರೊಬ್ಬ ಭಕ್ತರ
ಮನೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಪಾದಪೂಜೆ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಾಮಿಗಳೊಂದಿಗೆ
ನಾನು ಮತ್ತು ಸಾಗರದ ನಾಗೇಶ ಭಟ್ಟರು ಇದ್ದೆವು. ಅವರ ಮನೆಯಲ್ಲಿ ಪಾದಪೂಜೆಗೆ ಸಕಲ ವ್ಯವಸ್ಥೆಯನ್ನೂ
ಮಾಡಿದ್ದರು. ಸ್ವಾಮಿಗಳು ಆಸನದಲ್ಲಿ ಬಂದು ಕುಳಿತುಕೊಂಡರು. ನಾಗೇಶ ಭಟ್ಟರು ಪಾದುಕಾ ಪಟ್ಟಿಗೆಯನ್ನು
ತೆಗೆದುಕೊಂಡು ಬಾ ಎಂದು ಸೂಚಿಸಿದರು. ಆ ಪೆಟ್ಟಿಗೆಯು ಎಲ್ಲಿ
ಹುಡುಕಿದರೂ ಸಿಗಲಿಲ್ಲ. ಸ್ವಾಮಿಗಳು ಭಾಸ್ಕರಾ....
ಎಂದು ಕರೆದಾಗ ದೇಹದಲ್ಲೆಲ್ಲಾ ಮತ್ತಷ್ಟು ಭೀತಿ ಆವರಿಸಿತು. ಸ್ವಾಮಿಗಳ ಮುಂದೆ ಹೋಗಿ ಮೌನದಿಂದ ನಿಂತುಕೊಂಡೆನು.
ನನ್ನ ಜೀವನದ ಶೈಲಿಯನ್ನು ಅರಿತಿದ್ದರು. ನನಗೆ ಭಯವೋ ಭಯ. ಆದರೆ ಸ್ವಾಮಿಗಳು ಒಂದುಬಾರಿಯಾದರೂ ನನ್ನನ್ನು
ತೆಗಳಬಹುದಿತ್ತು. ಹಾಗೆ ಮಾಡಲೇ ಇಲ್ಲ. ನಗುತ್ತ ಮನೆಯ ಯಜಮಾನನಿಗೆ ಹೀಗೆ ಹೇಳಿದರು. ನಿನ್ನೆ ವಾಸ್ತವ್ಯಮಾಡಿದವರ
ಮನೆಯಲ್ಲಿ ಆ ಪೆಟ್ಟಿಗೆಯಿದೆ ಎಂದು ಹೇಳಿ ಅದನ್ನು ತರಲು ಸೂಚಿಸಿದರು. ಅದು ಕೂಡ ಮಂದಹಾಸವನ್ನು ತೋರುತ್ತಲೇ.
ನಾವು ಮಾಡಬಹುದೇ ನಮ್ಮ ಜೀವನದಲ್ಲಿ ಇಂತಹ ಅನುಷ್ಠಾನವನು. ಪರೋಪಕಾರಾರ್ಥಮಿದಂ ಶರೀರಮ್ | ಬೇರೆಯವರ ಉಪಕಾರಕ್ಕಾಗಿಯೇ
ಸ್ವಾಮಿಗಳು ಎಷ್ಟೋ ಮಹಾನ್ ಕಾರ್ಯಗಳನ್ನು ನೆರವೇರಿಸಿದ್ದಾರೆ. ಅವುಗಳಲ್ಲಿ, ವಿದ್ಯಾದಾನ, ಆರೋಗ್ಯದಾನ, ಮತ್ತು ಅನ್ನದಾನ ಪ್ರಮುಖವಾದವುಗಳು.
ಈ ಮೂರು ದಾನಗಳನ್ನು ತುಂಬಾ ವಿಶಿಷ್ಟರೀತಿಯಲ್ಲಿ ನೆರವೇರಿಸಿದ ತ್ರಿಮೂರ್ತಿಗಳಿವರು.
ಪೂಜ್ಯರ ತಾಳ್ಮೆಯನ್ನು ವಿಸ್ತೃತವಾಗಿ ತಿಳಿಸದೇ
ಸಂಕ್ಷಿಪ್ತವಾಗಿ ತಿಳಿಸ ಬಯಸುವೆ. ನಮಗೆ ತಲೆನೋವು ಬಂದರೆ ನಮ್ಮ ಕೂಗೂ ಆಕಾಶವನ್ನು ಮುಟ್ಟುತ್ತದೆ.
ಆದರೆ ಪೂಜ್ಯರಿಗೆ ಎಷ್ಟು ಕಾಯಿಲೆಗಳು ಆವರಿಸಿದರೂ ಒಂದು ಸಾರಿಯೂ ಕೂಡ ತಮ್ಮ ನೋವನ್ನು ಬೇರೆಯವರಿಗೆ
ತಿಳಿಸದೇ ತಾಳ್ಮೆಯಿಂದ ಜೀವನವನ್ನು ಸಾಗಿಸಿದ ಮಹನೀಯರಿವರು. ನಾನು ಕೇಳಿದಾಗ ಅಣ್ಣಾರ ಹೇಗಿದ್ದೀರಿ
? ಆರೋಗ್ಯ ಹೇಗಿದೆ ? ಎಂದು ಕೇಳಿದಾಗ, ಸ್ವಾಮಿಗಳಿಂದ ಬರುವ
ಉತ್ತರ.. " ಹ್ಯಾಂಗ್ ಇದ್ದೇನೆ ಅದ ಆರಾಮ " ಎಂದು ಹೇಳಿದ್ದು, ಆ ನಗುಮೊಗದಲ್ಲಿ ಉತ್ತರವನ್ನು
ಹೇಳಿದ್ದು ನನಗೆ ಒಂದು ಕಡೆ ನೋವಾದರೆ, ಇನ್ನೊಂದು ಕಡೆ ಆಶ್ಚರ್ಯವಾಗಿಯೂ ಕಂಡಿದ್ದೇನೆ.
ನನಗೆ ದತ್ತಗುರುವಿನ ದರ್ಶನವನ್ನು ಮತ್ತು ಗುರುಪರಂಪರೆಯತ್ತ
ಮನವೊಲಿಸಲು ಕಾರಣೀಭೂತರು ಈ ಮಹಾತ್ಮರು. ಹೆಮ್ಮೆಯಿಂದ ಹೇಳುತ್ತೇನೆ ನಾನು ಭಾಗ್ಯಶಾಲಿಯೆಂದು. ಯಾಕೆಂದರೆ
ಗುರುಚರಿತ್ರೆಯ ದತ್ತಮೂಲಮಂತ್ರದ ಉಪದೇಶವನ್ನು ಅವರ ಗುರುಗಳಿಂದ ಪಡೆದ ಸೂರ್ಯಗ್ರಹಣದ ದಿನವೇ ನನಗೆ
ಕೊಟ್ಟದ್ದು ಮತ್ತು ಅವರಿಂದ ಮೊಟ್ಟಮೊದಲಿಗೆ ಉಪದೇಶವನ್ನು ಪಡೆದವನು ನಾನು, ಹೇಳಲು ನನಗೆ ಹರ್ಷವೆನಿಸುತ್ತದೆ.
ಶಿಷ್ಯರ ಮೇಲಿನ ವಾತ್ಸಲ್ಯಾಂತಃಕರಣಗಳು ಸವಿದವರಿಗೇ ಗೊತ್ತು. ಎಷ್ಟೋ ಗುರುಪರಂಪರೆಯ ಗುಪ್ತ ಹಾಗೂ ಅರ್ಥಪೂರ್ಣವಾದ
ಎಷ್ಟೋ ವಿಷಯಗಳನ್ನು ಸ್ವಾಮಿಗಳು ನನ್ನೊಂದಿಗೆ ಹಂಚಿಕೊಂಡಿರುವುದುಂಟು. ನನ್ನ ಜೀವನದ ಶೈಲಿಯನ್ನೇ ಬದಲಿಸಿದ
ಮಹಾನ್ ತಪಸ್ವಿಗಳು ನನ್ನ ಗುರುಗಳು. ಈ ರೀತಿಯ ಸಂಬಂಧವನ್ನು ನಾ ಹ್ಯಾಂಗ ಮರೆಯಲಿ. ನೂರಾರು ವಿದ್ಯಾರ್ಥಿಗಳನ್ನು
ತಮ್ಮ ಆಶ್ರಯದಲ್ಲಿ ಇಟ್ಟುಕೊಂಡು ವಿದ್ಯಾದಾನವನು ಮಾಡಿದ ಮಹನೀಯರಿವರು. ಎಲ್ಲ ಶಿಷ್ಯರಲ್ಲಿಯೂ ಕೂಡ
ಅದೆಂತಹ ವಿಶ್ವಾಸ ಪ್ರೀತಿ. ತಂದೆ ತಾಯಿಯರೂ ಕೂಡ ಬೆರಗಾಗುವಂತಹದಾಗಿತ್ತು. ತಂದೆತಾಯಿಯರಿಗೆ ಹೀಗೆ
ಹೇಳುತ್ತಿದ್ದರು. ನಿಮಗೆ ಕೇವಲ ಒಬ್ಬರು ಇಬ್ಬರು ಮಕ್ಕಳು ಆದರೆ ನನಗೆ ನೂರಾರು ಜನ ಮಕ್ಕಳು ಎಂದು ಹೇಳುತ್ತಿದ್ದರು.
ಶಿಷ್ಯರ ಕುಟುಂಬದ ಮೇಲೆಯೂ ಅಷ್ಟೇ ಪ್ರೀತಿಯುಳ್ಳವರು ಪೂಜ್ಯರು. ಸ್ವಾಮಿಗಳು ನಮ್ಮನ್ನು ಬಿಟ್ಟು ಹೋದರೂ
ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿದರು ಎಂಬ ಭಾವನೆ ನನಗೆ ಬಂದಿತ್ತು. ಆದರೆ ಚೈತನ್ಯಮೂರ್ತಿಗಳು ನಮ್ಮೊಂದಿಗೆ
ಸದಾ ಇದ್ದಾರೆ. ಭಕ್ತರ, ಶಿಷ್ಯರ, ಹೃದಯಸಿಂಹಾಸನದಲ್ಲಿ ನಿಜವಾದ ಚಕ್ರವರ್ತಿಗಳಾಗಿ ಆಚಂದ್ರಾರ್ಕ ವಾಸವಾಗಿರುತ್ತಾರೆ.
ಎಂಬುದು ಸತ್ಯಸಂಗತಿ. ಯದ್ಭಾವಂ ತದ್ಭವತಿ | ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್
| ಮನಸ್ಸನಲ್ಲಿರುವುದನ್ನೇ
ಹೇಳುವುದು ಅದನ್ನೇ ಕಾರ್ಯರೂಪಕ್ಕೆ ತರುವುದು ಮಹಾತ್ಮರ ಲಕ್ಷಣ. ಈ ಉಕ್ತಿಯ ಸಾರ್ಥಕಗೊಳಿಸಿದಂತಹ ಮಹಾತ್ಮರಿವರು.
ನುಡಿದಂತೆ ನಡೆದ ಮಹನೀಯವಿರವರು. ಒಂದು ಬಾರಿ ಮನಸ್ಸಿನಲ್ಲಿ ಸತ್ಸಂಕಲ್ಪವನ್ನು ಮಾಡಿದರೆ ಅದನ್ನು ಕಾರ್ಯರೂಪಕ್ಕೆ
ತರುವ ಸಾಮರ್ಥ್ಯಹೊಂದಿದ ಸಮರ್ಥರಿವರು. ಕೋಟಿಜಪ ಯಜ್ಞದ ಒಂದು ಸಂದರ್ಭವದು. ರುದ್ರನು ತಾಂಡವ ನೃತ್ಯಮಾಡುತ್ತಾ
ಮಳೆಯ ರೂಪದಲ್ಲಿ ಧರೆಗಿಳಿದಾಗ ಭಕ್ತಸಮೂಹವೆಲ್ಲ ತಬ್ಬಿಬ್ಬುಗೊಂಡಾಗ ದಿನಾರ್ಧದಲ್ಲಿ ಎಲ್ಲರೀತಿಯ ಪರಿಷ್ಕಾರಗಳನ್ನು
ಮಾಡಿ ನ ಭೂತೋ ನ ಭವಿಷ್ಯತಿ ಎಂಬಂತೆ ಕಾರ್ಯಕ್ರಮವನ್ನು ನಡೆಸಿದಂತಹ ಪೂಜ್ಯರಿವರು. ಮತ್ತೇನು ಹೇಳಲಿ
ಸೂರ್ಯನ ವರ್ಣನೆಯನ್ನು ಹುಣ್ಣಿಮೆಯ ಚಂದಿರನ ಗುಣಗಾನವನು, ಎಷ್ಟು ಹೇಳಲಿ ಪುಟಗಳೇ ಸಾಲದಾದಾವು.................................
ಬಾ ಬಾ ಭಕುತರ ಹೃದಯಮಂದಿರದಿ ನೆಲೆಸು ಬಾ.....